
31 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಹಣಕಾಸು ಕ್ಷೇತ್ರದಲ್ಲಿ ನೀಡುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು ವರದಿ ವರ್ಷದಲ್ಲಿ ಅಮೋಘ ಸಾಧನೆಗೈದು, ದಿನಾಂಕ 31.03.2025ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ರೂ.16.01 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ.12.01 ಕೋಟಿ) ಕ್ಕಿಂತ ರೂ.4 ಕೋಟಿ ಹೆಚ್ಚಳದೊಂದಿಗೆ ಶೇಕಡಾ 31 ಏರಿಕೆಯಾಗಿದೆ. ಸಂಘದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಹಾಗೂ 31.03.2025ಕ್ಕೆ ಸಂಘದ ಅನುತ್ಪಾದಕ ಆಸ್ತಿ ಕೇವಲ ರೂ.24 ಲಕ್ಷವಿದ್ದು ಇದು ಹೊರಬಾಕಿ ಸಾಲದ ಶೇ.0.05 ಕ್ಕೆ ಸೀಮಿತವಾಗಿರುವುದು ಹಾಗೂ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ 0% ಆಗಿರುವುದು ಒಂದು ಗಮನಾರ್ಹ ಸಾಧನೆಯಾಗಿದೆ. ಇದು ಸಂಘದ ಪ್ರಗತಿಯನ್ನು ಹಾಗೂ ಸಂಘದ ಆಡಳಿತಾತ್ಮಕ ಮತ್ತು ವ್ಯವಹಾರಾತ್ಮಕ ಸದೃಢತೆಯನ್ನು ಸೂಚಿಸುತ್ತದೆ.
2020ನೇ ಸಾಲಿನಲ್ಲಿ ಶ್ರೀ ಕೆ. ಜೈರಾಜ್ ಬಿ. ರೈಯವರು 2ನೇ ಬಾರಿ ಅಧ್ಯಕ್ಷರಾಗಿ ಸಂಘದ ನೇತೃತ್ವ ವಹಿಸಿಕೊಂಡ ಸಂದರ್ಭದಲ್ಲಿ ಹಮ್ಮಿಕೊಂಡ ವಿಷನ್ 2025ರಂತೆ 31.03.2025ಕ್ಕೆ ಸಂಘದ ಒಟ್ಟು ವ್ಯವಹಾರ ರೂ.1000 ಕೋಟಿ, 5 ಹೊಸ ಶಾಖೆಗಳೊಂದಿಗೆ 30 ಶಾಖೆಗಳನ್ನು ಹೊಂದುವುದು, ರೂ.10 ಕೋಟಿ ಲಾಭ, ಅನುತ್ಪಾದಕ ಆಸ್ತಿಯನ್ನು ಶೇ.10 ಕ್ಕೆ ಸೀಮಿತಗೊಳಿಸಿವುದು ಎಂಬ ಕಾರ್ಯಯೋಜನೆಗಳನ್ನು 31.03.2025ಕ್ಕೆ ಮೊದಲೇ ತಲುಪಿರುವುದು ಹಾಗೂ ರೂ.1000 ಕೋಟಿಗೆ ಮೀರಿದ ಒಟ್ಟು ವ್ಯವಹಾರವನ್ನು ದಾಟಿದ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರಪ್ರಥಮ ಏಕೈಕ ಕ್ರೆಡಿಟ್ ಸಹಕಾರ ಸಂಘವಾಗಿ ಮೂಡಿ ಬಂದಿರುವುದು ಸಂಘದ ಹೆಗ್ಗಳಿಕೆಯಾಗಿರುತ್ತದೆ. ಅಲ್ಲದೆ 31.03.2025ಕ್ಕೆ ರೂ.1094 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಠೇವಣಿಗಳ ಸಂಗ್ರಹಣೆಯಲ್ಲಿ, ಬ್ಯಾಂಕುಗಳು ಮತ್ತು ಇತರ ಸಹಕಾರ ಸಂಘಗಳ ತೀವ್ರ ಪೈಪೋಟಿಯ ನಡುವೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಾಲಕಾಲದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ತನ್ನ 25 ಶಾಖೆಗಳ ಮುಖಾಂತರ 1,27,971 ಠೇವಣಿ ಖಾತೆಗಳಲ್ಲಿ ಒಟ್ಟು ರೂ.೫೮೯ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ.
31.03.2025ಕ್ಕೆ ಸಂಘದ ಹೊರಬಾಕಿ ಸಾಲವು ರೂ.505 ಕೋಟಿಯನ್ನು ಮೀರಿದ್ದು, ಹೊಸ ಮೈಲಿಗಲ್ಲನ್ನು ದಾಟಿದೆ. ಸ್ಪರ್ಧಾತ್ಮಕ ವ್ಯವಹಾರದಲ್ಲಿ 31.03.2025ಕ್ಕೆ 1643 ಖಾತೆಗಳಲ್ಲಿ ರೂ.34 ಕೋಟಿ ಆಟೋರಿಕ್ಷಾ ಸಾಲ, 521 ಯುವ ಜನತೆಗೆ ದ್ವಿಚಕ್ರ ಸಾಲ ರೂ.3.98 ಕೋಟಿ, ಅದಲ್ಲದೆ ಚಿನ್ನಾಭರಣ ಸಾಲ, ಗೃಹ ಸಾಲ, ಇತರ ವಾಹನ ಸಾಲ, ಅಡವು ಸಾಲ ಮುಂತಾದ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.
2024ನೇ ಸಾಲಿನಲ್ಲಿ ಮೊದಲ ಬಾರಿಗೆ ಅನುಷ್ಟಾನಿಸಲಾದ ಅವಿಭಜಿತ ದ.ಕ ಜಿಲ್ಲೆಯಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದ ಅತ್ಯುತ್ತಮ ಕ್ರೆಡಿಟ್ ಸಹಕಾರ ಸಂಘಕ್ಕೆ ನೀಡಲಾಗುವ “ಸಹಕಾರ ಮಾಣಿಕ್ಯ” ಪ್ರಶಸಿ ಹಾಗೂ ರೂ.1000 ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿದ ಸಾಧನೆಗಾಗಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಮಹಾಸಭೆಯಲ್ಲಿ ‘ವಿಶೇಷ ಗೌರವ’ ಪ್ರಶಸ್ತಿ ಹೀಗೆ ಸಹಕಾರ ಇಲಾಖೆಯಿಂದ ಒಟ್ಟು 7 ಬಾರಿ ರಾಜ್ಯ ಮಟ್ಟದ ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನಿಂದ ಒಟ್ಟು 13 ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಕ್ರೆಡಿಟ್ ಕೋ-ಓಪರೇಟಿವ್ ಸಂಘ ಪ್ರಶಸ್ತಿ ದೊರೆತಿದೆ.
ವಿಷನ್ -2030ರಂತೆ 31.03.2030ಕ್ಕೆ ರೂ. 2,000 ಕೋಟಿ ಒಟ್ಟು ವ್ಯವಹಾರ, ಅನುತ್ಪಾದಕ ಆಸ್ತಿಯನ್ನು ಶೇ.0.10 ರೊಳಗೆ ಸೀಮಿತಗೊಳಿಸುವುದು, ರೂ.20 ಕೋಟಿ ನಿವ್ವಳ ಲಾಭ, ಆಧುನಿಕ ತಂತ್ರಜ್ಞಾನ ಅವಿಷ್ಕಾರಗಳ ಅಳವಡಿಕೆಗಳೊಂದಿಗೆ ಗ್ರಾಹಕರಿಗೆ ಹೆಚ್ಚಿನ ತಂತ್ರಜ್ಞಾನ ಪ್ರೇರಿತ ಸೇವೆಗಳನ್ನು ನೀಡುವುದು, ಶಾಖೆಗಳ ಸಂಖ್ಯೆಯನ್ನು ಒಟ್ಟು 40 ಕ್ಕೆ ಏರಿಸುವುದು, ಸದಸ್ಯರಿಗೆ ಶೇ.25 ರಷ್ಟು ಡಿವಿಡೆಂಡನ್ನು ಸತತವಾಗಿ ನೀಡುವ ಕಾರ್ಯಯೋಜನೆಗಳನ್ನು ಹೊಂದಲಾಗಿದೆ.
ಮಂಗಳೂರಿನ ಕೇಂದ್ರ ಕಛೇರಿಯ ಹೊಸ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದ್ದು, ಸಪ್ಟೆಂಬರ್ 2025ಕ್ಕೆ ಈ ಸುಸಜ್ಜಿತ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ.
ಸಂಘದ ಕಾರ್ಯವ್ಯಾಪ್ತಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿ, 1 ಲಕ್ಷಕ್ಕೂ ಅಧಿಕ ಸಂತೃಪ್ತ ಠೇವಣಿದಾರ, ಸಾಲಗಾರ ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯದಕ್ಷತೆಯಿಂದ ತನ್ನ ಎಲ್ಲಾ ಕಾರ್ಯಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.